ನಜೀಮ್ - ಉದ್ದೌಲ      -    
ಬಂಗಾಲದ ನವಾಬನಾಗಿದ್ದ ಮೀರ್ ಜಾಫರನ ದ್ವಿತೀಯ ಪುತ್ರ. ಮೀರ್ ಜಾಫರ್ 1765ರ ಫೆಬ್ರವರಿ 6ರಂದು ತೀರಿಕೊಂಡ. ಅನಂತರ ಬಂಗಾಲದ ಸಲಹಾಮಂಡಲಿ ಮೀರ್ ಜಾಫರನ ಹಿರಿಯ ಮಗನ ಬದಲು ನಜೀಮ್-ಉದ್ದೌಲನನ್ನು ನವಾಬನನ್ನಾಗಿ ನೇಮಿಸಿತು.

	1765ರ ಫೆಬ್ರವರಿ 10ರಂದು ಈತ ಬ್ರಿಟಿಷರೊಂದಿಗೆ ಅವಹೇಳನಕರವಾದ ಒಪ್ಪಂದವೊಂದಕ್ಕೆ ಸಹಿ ಹಾಕಬೇಕಾಯಿತು. ಈ ಕರಾರಿನಂತೆ ಬಂಗಾಲದ ಆಡಳಿತವನ್ನು ಬ್ರಿಟಿಷರಿಗೆ ವಹಿಸಿಕೊಟ್ಟು, ಅವರ ಸಲಹೆಯ ಮೇರೆಗೆ ಮಹಮ್ಮದ್ ರೇಜಾಖಾನ್ ಎಂಬುವನನ್ನು ಉಪ ನವಾಬನನ್ನಾಗಿ ನೇಮಿಸಿಕೊಳ್ಳಬೇಕಾಯಿತು. ಕಂಪನಿಯ ಅಪ್ಪಣೆ ಇಲ್ಲದೆ ಉಪ ನವಾಬ ಅಥವಾ ಮಂತ್ರಿಯನ್ನು ವಜಾ ಮಾಡುವ ಅಧಿಕಾರ ನಜೀಮ್-ಉದ್ದೌಲನಿಗೆ ಇರಲಿಲ್ಲ. ಎಲ್ಲ ಅಧಿಕಾರ ಇಂಗ್ಲಿಷರ ಕೈಸೇರಿ, ಈತ ನಾಮಮಾತ್ರ ನವಾಬನಾಗಿ ಉಳಿದು, ಕಂಪನಿ ಸರ್ಕಾರ ಕೊಡುವ ವೇತನದಲ್ಲೇ ತೃಪ್ತಿಪಟ್ಟುಕೊಳ್ಳಬೇಕಾಯಿತು.

	ಮೊದಲು ನವಾಬನಿಗಿದ್ದ ರೂ. 53 ಲಕ್ಷ ವೇತನವನ್ನು ಕಂಪನಿ ಸರ್ಕಾರ 1766ರಲ್ಲಿ ರೂ. 41 ಲಕ್ಷಗಳಿಗೂ 1769ರಲ್ಲಿ ರೂ. 32 ಲಕ್ಷಗಳಿಗೂ 1772ರಲ್ಲಿ ರೂ. 15 ಲಕ್ಷಗಳಿಗೂ ಇಳಿಸಿತು. ನವಾಬನ ವೇತನ ಕಡಿಮೆಯಾದಂತೆ ಆತನ ಅಧಿಕಾರ ಹಾಗೂ ಪ್ರಭಾವಗಳೂ ಕುಂದಿದವು. ಅನಧಿಕೃತವಾಗಿ ಬಂಗಾಲ ಇಂಗ್ಲಿಷರ ವಶವಾಯಿತು.	     (ಜಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ